*ಔತಣ* -ರಾಜಶೇಖರ ಕುಕ್ಕುಂದಾ –ಬಾಗಲಕೋಟೆ
ರಾಜಶೇಖರ ಕುಕ್ಕುಂದಾ –ಬಾಗಲಕೋಟೆ
______________________________________
ರಾಜಶೇಖರ ಕುಕ್ಕುಂದಾ’ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನಲ್ಲಿ ಸಂಯೋಜಿತ ಪ್ರಾಧ್ಯಾಪಕರು. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
ಕೃತಿಗಳು: ಚೆಲುವ ಚಂದಿರ, ಗೋಲಗುಮ್ಮಟ, ಮತ್ತು ಪುಟಾಣಿ ಪ್ರಾಸಗಳು (ಮಕ್ಕಳ ಕವನ ಸಂಕಲನಗಳು), ತಾಂತ್ರಿಕ ವಿಷಯಗಳ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕವಿತೆಗಳು ಸಿ. ಬಿ. ಎಸ್. ಇ. ಕನ್ನಡ ಭಾಷೆಯ ಪಠ್ಯದಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ಮತ್ತು ಶಿಶುಗೀತೆಯ ಅಲ್ಬಂಗಳಲ್ಲಿ ಸೇರಿವೆ. ಕವಿತೆಗಳು ಮತ್ತು ಲೇಖನಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ; ಆಕಾಶವಾಣಿಯಲ್ಲಿ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ಪ್ರಸಾರಗೊಂಡಿವೆ.
ಪುರಸ್ಕಾರಗಳು: ಪ್ರಜಾವಾಣಿ ದಿನಪತ್ರಿಕೆಯ ದೀಪಾವಳಿ ಶಿಶು ಕಾವ್ಯ ಸ್ಪರ್ಧೆಯಲ್ಲಿ ಹಲವು ಬಾರಿ ಬಹುಮಾನ, ಶಿವಮೊಗ್ಗದ ಕರ್ನಾಟಕ ಸಂಘವು ಮಕ್ಕಳ ಸಾಹಿತ್ಯಕ್ಕೆ ನೀಡುವ 2012 ನೇ ಸಾಲಿನ ‘ನಾ ಡಿಸೋಜಾ’ ಪುರಸ್ಕಾರ, 2013 ನೇ ಸಾಲಿನ ‘ಅಮ್ಮ’ ಪುರಸ್ಕಾರ ಪಡೆದಿದ್ದಾರೆ.
ಕೃಪೆ:ಬುಕ್ ಬ್ರಹ್ಮ
ಇಗೋ ಅವರದ್ದು ಒಂದು ಕವಿತೆ
ಮಕ್ಕಳ ಪದ್ಯ: ಔತಣ
ರಾಜಶೇಖರ ಕುಕ್ಕುಂದಾ –ಬಾಗಲಕೋಟೆ
ಹೇನಿಗೆ ಒಮ್ಮೆ
ಔತಣ ಕೊಟ್ಟೆ
ಬಂದೇಬಿಟ್ಟಿತು ಮನೆಗೆ;
ತರ ತರ ತಿಂಡಿಯ
ತಟ್ಟೆಯನಿಟ್ಟೆ
ನಡದೇಬಿಟ್ಟಿತು ಹೊರಗೆ
ಗದ್ದವ ಹಿಡಿದು
ಕೇಳಿಯೇಬಿಟ್ಟೆ
‘ಯಾಕಪ್ಪಾ ಸಿಟ್ಟು?’
ಎಂಥ ಫಜೀತಿ
ಔತಣವನ್ನು
ಕೊಡಬಾರದೆ ಕೊಟ್ಟು!
‘ಒಳಗೆ ಬಾ ನೀ
ನಮ್ಮನೆ ತಿನ್ನು
ಇದು ಮರ್ಯಾದೆಯ ಪ್ರಶ್ನೆ!’
ಎನ್ನಲು ಹೊಕ್ಕಿತು
ಅವರಿವರೆನದೆ
ಎಲ್ಲರ ತಲೆಯನ್ನೆ!
ಅಕ್ಕ ತಂಗಿಯರು
ತಲೆ ಹೇನೆಣಿಸುತ
ಒಂದು, ಎರಡು, ಮೂರು;
ಇಂದಿಗೂ ನನ್ನ
ಶಪಿಸುತಲಿರುವರು
ನಾ ಹೇಗಾಗಲಿ ಪಾರು?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ