"ಎಲ್ಲೆಲ್ಲೂ ಬೆಳಕು" - ವೆಂಕಟೇಶ್ ಪಿ. ಆರ್

ವೆಂಕಟೇಶ್ ಪಿ.ಆರ್
__________________



"ಎಲ್ಲೆಲ್ಲೂ ಬೆಳಕು"
             - ವೆಂಕಟೇಶ್ ಪಿ.ಆರ್
                ಹಿರಿಯ ಸಾಹಿತಿಗಳು
                     ಬಳ್ಳಾರಿ

ಎಲ್ಲಲ್ಲೂ ಬೆಳಕೆ
ಮನೆಯಲ್ಲಿ ಬೀದಿಯಲ್ಲಿ ಗಲ್ಲಿಗಲ್ಲಿಯಲ್ಲಿ
ಜಗಮಗಿಸುವ ಬೆಳಕು
ಕಾಣಲಾರದು ಧರೆಯು ಹೊಳೆಯಲಾರದು ಬಾನು 
ಎಲ್ಲಲ್ಲೂ ಕಾರಿರುಳು ಕಡೆದ ಕುರುಡು.
ಎಲ್ಲಲ್ಲೂ ಬೆಳಕೆ
ಗಾಳಿಗೆ ಓಡುತ್ತೆ 
ಮಳೆಗೆ ಆರುತ್ತೆ
ಎತ್ತೆತ್ತಲೋ ಹಾರಿ 
ಮಹಡಿಯ ಸೇರುತ್ತೆ
ಬಲವಿಲ್ಲದ ಕೈ ಹೊಸೆದ ನಿತ್ರಾಣದ ಬತ್ತಿ 
ಎಣ್ಣೆ ಇಲ್ಲದ ಹಣತೆಯಲ್ಲಿ 
ಏನು ಕಾಣುತ್ತಿ
ಮೈಸುಳಿವ ಮಿಂಚಿಲ್ಲ, 
ಕಾವು ತಾಕುತ್ತಿಲ್ಲ
ಕುಡಿ ಇಲ್ಲ ಕಣ್ಣಿಲ್ಲ ಊದಿಹೊತ್ತಿಸಲು ಕೆಂಪು ಕೆಂಡವೂ ಇಲ್ಲ.

ಕಾಡಾನೆಗತ್ತಲಪ್ಪಿ  ಬೇಸತ್ತ ಜನ
ಬಸವಳಿದ ಬಾಯ್ತುಂಬ ಶಪಿಸಿದ್ದಾರೆ ಮನ
ಸಾಯಬೇಕಿದೆ ಬೆಳಕು
ಹಂಗಿನೊಳಗೆ ಅಳುಕು
ಇದರೊಳಗೆ ಗೂಂಯ್ಗುಡುವ  ಸೊಳ್ಳೆಗಳ ತಿವಿತ
ತಡವರಿಸುವ ಜೀವಕೆ ಕತ್ತಲ ಕವಿತ
ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಂಗೆಟ್ಟ ಜನ
ಕಣ್ಣಮುಚ್ಚಿ ಕನಸಿದ್ದಾರೆ ಭರವಸೆಯ ಬನ

ರೆಪ್ಪೆ ಬಾಗಿಲ ತಟ್ಟಿ ಕಣ್ಣ ಕವಡಿಯ ಮೀಟಿ
ಕತ್ತಲ ಪೊರೆ ಹರಿದು 
ಮೈ ತುಂಬಿ ಹಾಡಿದೆ ಸದ್ದುಗದ್ದಲವಿಲ್ಲ 
ಹರಿವ ಮುರಿತವೂ ಇಲ್ಲ
ಬೆಟ್ಟಗುಡ್ಡವ ಸವರಿ 
ಹಸಿರ ಒಡಲಿಗೆ ಹಾದು
ಮನತುಂಬ ಹರಡಿದೆ 
ಮಡಿ ಇಲ್ಲದೆ
ಕದ ಕಿಟಕಿ ತೆರೆದು ಬಿಡಿ 
ಕಸವೆಲ್ಲ ಗುಡಿಸಿಬಿಡಿ
ಅಂಗಳದ ಮೈನೆಲ್ಲ 
ಸಂದಿಲ್ಲದೆ ಸಾರಿಸಿಡಿ
ಬೆವರೊಡೆದ ಕುಡಿಹೊತ್ತ 
ಬೆಳಕ ಬಂಧುರಕೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾವು ಹುಡುಗಿಯರೇ ಹೀಗೆ* - ಪ್ರತಿಭಾ ನಂದಕುಮಾರ್

***ಕನಸು ಕಾಣುವ ಹೋತ್ತಲ್ಲ***