*ನಾವು ಹುಡುಗಿಯರೇ ಹೀಗೆ* - ಪ್ರತಿಭಾ ನಂದಕುಮಾರ್



*ಪ್ರತಿಭಾ ನಂದಕುಮಾರ್*


ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 15ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ ಮನೋಧರ್ಮವನ್ನಾಗಿಸಿಕೊಂಡಿರುವ ಕವಿ. ಅವರ ವೈಯಕ್ತಿಕ ಮತ್ತು ವೃತ್ತಿ ಬದುಕುಗಳೆರಡರಲ್ಲೂ ನಿರಂತರ ಸಾಹಸ ಮತ್ತು ಪ್ರಯೋಗಗಳನ್ನು ನಡೆಸಿದವರು. ಉತ್ಕಟವಾಗಿ ಜೀವಿಸುವುದೇ ಬದುಕಿನ ಪರಮ ಸತ್ಯವನ್ನು ತಿಳಿಯಲು ಇರುವ ಏಕೈಕ ದಾರಿ ಎಂದು ನಂಬಿರುವ ಪ್ರತಿಭಾ ಅದೇ ಉತ್ಕಟತೆಯನ್ನು ತಮ್ಮ ಕವಿ ಸಮಯದುದ್ದಕ್ಕೂ ಕಾದುಕೊಂಡಿದ್ದಾರೆ. ಅವರ ಪ್ರಕಟಿತ ಪುಸ್ತಕಗಳು- ನಾನು ಹುಡುಗಿಯರೇ ಹೀಗೆ, ಈತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಾಕಾರಂ, ಅವರು ಪುರಾವೆಗಳನ್ನು ಕೇಳುತ್ತಾರೆ, ಮುನ್ನುಡಿ ಬೆನ್ನುಡಿಗಳ ನಡುವೆ, ಕಾಫಿ ಹೌಸ್, ಮುದುಕಿಯರಿಗಿದು ಕಾಲವಲ್ಲ ಅವರ ಕವನ ಸಂಕಲನಗಳು. ಯಾನ- ಕಥಾಸಂಕಲನ, ಆಕ್ರಮಣ- ಅನುವಾದಿತ ಕಥೆಗಳು, ಸೂರ್ಯಕಾಂತಿ- ಅನುವಾದಿತ ಡೋಗ್ರಿ ಕವನಗಳು. 

ಸಾಹಿತ್ಯ ಕ್ಷೇತ್ರದ ಕೃಷಿಗಾಗಿ ‘ಮಹಾದೇವಿ ವರ್ಮಾ ಕಾವ್ಯ ಸಮ್ಮಾನ್’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಮುದ್ದಣ್ಣ ಕಾವ್ಯ ಪ್ರಶಸ್ತಿ’, ‘ಡಾ.ಶಿವರಾಮ ಕಾರಂತ ಪ್ರಶಸ್ತಿ’, ‘ಪು.ತಿ.ನ ಕಾವ್ಯ ಪ್ರಶಸ್ತಿ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ‘ಅನುದಿನದ ಅಂತರಗಂಗೆ’ ಪ್ರತಿಭಾ ನಂದಕುಮಾರ್ ಅವರ ಆತ್ಮಕಥನ

ಪ್ರತಿಭಾ ನಂದಕುಮಾರ್

(25 Jan 1955)


ಇಗೋ ಅವರ ಒಂದು ಕವಿತೆ:

ನಾವು ಹುಡುಗಿಯರೇ ಹೀಗೆ...
"''''''''''''''''''''''''''''’'''''

-೧-

ಹೌದು ಕಣೆ ಉಷಾ

ನಾವು ಹುಡುಗಿಯರೇ ಹೀಗೆ...

ಏನೇನೋ ವಟಗುಟ್ಟಿದರೂ

ಹೇಳಬೇಕಾದ್ದನ್ನು ಹೇಳದೆ

ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.

ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ

ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ

ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.

ಹೇಳಲೇಬೇಕು ಎನಿಸಿದ್ದನ್ನು

ಹೇಳಹೋಗಿ ಹೆದರಿ ಏನೇನೋ ತೊದಳುತ್ತೇವೆ

'ಐ ಲವ್ ಯೂ' ಅಂತ ಹೇಳಲು ಕಷ್ಟಪಟ್ಟು

ಬೇರೆ ಏನೇನೋ ದಾರಿ ಹುಡುಕಿ

ಸಂದೇಶ ಮುಟ್ಟಿಸಲು ಹೆಣಗುತ್ತೇವೆ.

ಅದನ್ನು ಅರ್ಥ ಮಾಡಿಕೊಳ್ಳಲಾರದೆ

ಹುಡುಗರು ಕೈ ತಪ್ಪಿದಾಗ

ಮುಸು ಮುಸು ಅಳುತ್ತೇವೆ.

ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ

ನಾವೇ ದುರಂತ ನಾಯಕಿಯರೆಂದು

ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.

ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.

ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.

ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ

ಅರಳುವುದೇ ಇಲ್ಲ ಉಷಾ...

-೨-

ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ

ಕೈಗೊಂದು ಕಾಲಿಗೊಂದು ಮಕ್ಕಳಾಗಿ

ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ

'ಅವನು' ಸಿಗುತ್ತಾನೆ.

ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ

ಅಂತ ರೋಷ ತಾಳುತ್ತೇವೆ.

ಆದರೆ ಮೇಲೆ ನಗುನಗುತ್ತಾ 'ಅವನ'

ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.

ಯಾಕೆಂದರೆ ಅವಳದೂ ಅದೇ ಕಥೆಯಲ್ಲವೇ?

ನಾವು ಹುಡುಗಿಯರೇ ಹೀಗೆ...

                           - ಪ್ರತಿಭಾ ನಂದಕುಮಾರ್

ಕಾಮೆಂಟ್‌ಗಳು

  1. ಕವನ ಓದಲು ಸಿಕ್ಕಿದ್ದಕ್ಕೆ ಖುಷಿಯಾಯಿತು.ಎಷ್ಟೇ ಬದಲಾಗಿದ್ದೇವೆ ಎಂದರೂ ಹುಡುಗಿಯರ ಮನಸ್ಸು ಅಂದಿನಿಂದ ಇಂದಿನವರೆಗೂ ಈಗಲೂ ಹಾಗೆ ಇದೆ.ಎಲ್ಲಾ ಆಸೆಗಳನ್ನು ಮನದಲ್ಲಿ ಅದುಮಿಟ್ಟುಕೊಂಡೇ ಬದುಕುತ್ತಾರೆ.ತಮ್ಮನ್ನು ತಾವೇ ಸಮಾಧಾನಪಡಿಸುತ್ತಾರೆ.ಒಟ್ಟಿನಲ್ಲಿ ಕವನ ಎಲ್ಲಾ ಕಾಲಕ್ಕೂ ಅನ್ವಯಿಸುವಂತಿದೆ.🥰☺️🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

***ಕನಸು ಕಾಣುವ ಹೋತ್ತಲ್ಲ***

"ಎಲ್ಲೆಲ್ಲೂ ಬೆಳಕು" - ವೆಂಕಟೇಶ್ ಪಿ. ಆರ್