"ಬಿಕರಿಗಿಟ್ಟ ಮೇಟಿವಿದ್ಯೆ ಮೇಣಿಹಾಲು!" - ಡಾ.ವಡ್ಡಗೆರೆ ನಾಗರಾಜಯ್ಯ
ಬಿಕರಿಗಿಟ್ಟ ಮೇಟಿವಿದ್ಯೆ ಮೇಣಿಹಾಲು!
*******************************
ನನ್ನ ಅಪ್ಪ ನೇಗಿಲಿಡಿದು ಬಯಲುಕ್ಕೆಯ
ಉಳುತ್ತಿರುವಾಗ
ಅಲ್ಲೊಬ್ಬ
ಬದುವಿನಗುಂಟ
ನಡೆದು ಹೋಗುತ್ತಿದ್ದ ಹಾಲುಗಲ್ಲದ
ಹುಡುಗನನ್ನು ಕೂಗಿ ಕರೆವುದನ್ನು
ನಾನು ಕಂಡಿದ್ದೆ,
"ಅಪ್ಪದೋ ಕಂದಾ...!
ನಿಂಗೆ ಮೇಣಿಹಾಲು ಕುಡಿಸ್ತೀನಿ ಬಾರೋ...!"
ಆ ಹುಡುಗನ ಕೈಹಿಡಿದ ನನ್ನಪ್ಪ ಅವನ
ಅಂಗೈಗಳಿಂದ ನೇಗಿಲ
ಮೇಣಿ ಹಿಡಿಸಿ
ಸೀಳುಕ್ಕೆಯಲ್ಲಿ ಮೂಡಿದ
ಕುಳದ ಗೆರೆಗುಂಟ ಹಸಿರು
ಅಕ್ಷರದ ಮೇಣಿಹಾಲನೆರೆಯುತ್ತಿದ್ದ!
ಎತ್ತುಗಳ ಹೆಗಲಿಗೆ ನೊಗವೂಡಿ
ನೇಗಿಲ ಮೇಣಿ ಹಿಡಿದು
ಮೇಟಿ ವಿದ್ಯೆಯ ಕಲಿವುದನ್ನು
'ಮೇಣಿಹಾಲು ಕುಡಿಯುವುದು'
ಎಂದು
ಭೂಸ್ತನ್ಯ ಜನನಿಗೆ
ಹೋಲಿಸಿರುವ ಸೋಜಿಗದ ವಿದ್ಯೆ ಇದು!
ನನಗೂ ಹೀಗೆಯೇ
ನಮ್ಮೂರ ತಿಗಳರ ಬಯಲಪ್ಪ ಮೇಣಿಹಾಲು ಕುಡಿಸಿ ಮೇಟಿ ವಿದ್ಯೆಯ
ಪ್ರಥಮ ಪಾಠಗಳನ್ನು ಕಲಿಸಿದ್ದ ನೆನಪಾಯಿತು.
ನೇಗಿಲಿಡಿದು ಉಳುವ ಗಂಡು ಕೂಡಾ
ಮೇಣಿಹಾಲು ಕುಡಿಸುವ
ಹೆಣ್ಣಾಗುವ ತಾಯ್ತನದ
ಬೆಡಗನ್ನು ಕಂಡು ಬೆರಗಾದೆ!
ಬಯಲ ಬದುವಿನಗುಂಟ
ನಡೆಯುತ್ತಿದ್ದ ಆ ಹುಡುಗ
ನನ್ನಪ್ಪ ಕುಡಿಸಿದ ಮೇಣಿಹಾಲು ಕುಡಿದು ಅವನ
ಅಂಗೈನಲ್ಲಿ ಪರಂಜ್ಯೋತಿ ಉರಿದಿತ್ತು!
ಆ ಹುಡುಗನ ಬದುಕಿನ
ಬಯಲುಕ್ಕೆ ಹಸಿರು ಪತ್ತಲವನುಟ್ಟು ನಕ್ಕಿತ್ತು.
ಲಾಭನಷ್ಟ ಕ್ರಯ ವಿಕ್ರಯಗಳ
ಬಾಬತ್ತಿಲ್ಲದೆ ಜೀವರಸದ ಬಾಳುವೆಗೆ ಅನ್ನರಸವನೀಯುವ
ವಿದ್ಯೆಯ ಕಲಿಸುವ
ರೈತನ ಬೆನ್ನೆಲುಬ ಬೆವರ ಬೇಗುದಿಯ ಮೇಣಿಹಾಲು
ಇಂದು ಕಾರ್ಪೊರೇಟ್ ಬಂಡವಾಳಿಗರ
ಚಕ್ಕಂದಾಟದಲ್ಲಿ ವಿಶ್ವಮಾರುಕಟ್ಟೆಯ
ಸರಕು!
ರೈತರ ಕಳೇಬರಗಳ ಮೇಲೆ
ಮೇಟಿ ವಿದ್ಯೆಯ ಮೇಣಿಹಾಲಿನ
ಸರಕು ಮಾರಾಟಕ್ಕಿದೆ ಕೊಳ್ಳಿರೋ... ಕೊಳ್ಳಿರೋ...!
ಡಾ.ವಡ್ಡಗೆರೆ ನಾಗರಾಜಯ್ಯ
8722724174
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ